ಮಡಿಕೇರಿ ಮೇಲ್ ಮಂಜು

ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ಟ್ವಿಟ್ಟರಿನಲ್ಲಿ ‘ಮಡಿಕೇರಿ ಮೇಲ್ ಮಂಜು’ ಕವನದ ಸಾಹಿತ್ಯ ಬೇಕಿತ್ತು ಎಂದು ಕೇಳಿದಾಗ, ತಕ್ಷಣ ನೆನಪಿಗೆ ಬಂದದ್ದು ಹೋದ ವರ್ಷದ ನನ್ನ ಅನುಭವ. ಕಳೆದ ವರ್ಷ ಏಪ್ರಿಲ್ಲಿನಲ್ಲಿ, ಬೆಂಗಳೂರಿನ ಬಿರುಬಿಸಿಲನ್ನು ತಪ್ಪಿಸಿಕೊಳ್ಳಲೆಂದು ಮಡಿಕೇರಿಗೆ ಹೊರಟರೆ ಅಲ್ಲೂ ಅಷ್ಟೇ ಬಿಸಿಲು. ಆದರೆ ಸಂಜೆಯಾಗುತ್ತಿದ್ದಂತೆ ಶುರುವಾದ ತಂಗಾಳಿ, ಬೆಂಗಳೂರಿಗೂ ಮಡಿಕೇರಿಗೂ ಇರುವ ವ್ಯತ್ಯಾಸ ತೋರಿಸಿತ್ತು. ಸಂಜೆ ಸರಿದು ರಾತ್ರಿಯಾದಂತೆ ಪ್ರಾರಂಭವಾದ ಸಣ್ಣ ಹನಿ, ಬರುಬರುತ್ತಾ ಧಾರಾಕಾರವಾಗಿ ಸುರಿಯತೊಡಗಿತು. ಬೆಳಿಗ್ಗೆ ಎದ್ದು ನಾವಿದ್ದ ರೂಮಿನಿಂದ ಹೊರಬಂದು ನೋಡಿದರೆ ಒಂದು ಹೊಸ ಮಾಯಾಲೋಕ. ಬೆಟ್ಟ, ಗಿಡ-ಮರಗಳನ್ನೂ ತಬ್ಬಿ ಹಿಡಿದಿದ್ದ ಮಂಜು, ಜಿ. ಪಿ. ರಾಜರತ್ನಂರವರ ‘ಮಡಕೇರೀ ಮೇಲ್ ಮಂಜು’ ಕವನವನ್ನು ನೆನಪಿಸಿದವು.

ಪಯಣಿಗ - ಮಡಿಕೇರಿ ಮೇಲ್ ಮಂಜು

ಕವನದ ಪೂರ್ತಿ ಸಾಹಿತ್ಯ ನನ್ನಲ್ಲಿಲ್ಲದ್ದರಿಂದ, ಬೆಂಗಳೂರಿನಲ್ಲಿರುವ ಅಕ್ಕನಿಗೆ ಫೋನಾಯಿಸಿ ಕವನವನ್ನು ಮಿಂಚೆಯಲ್ಲಿ ಪಡೆದು ಇಲ್ಲಿ ಹಾಕಿದ್ದೇನೆ…

ಬೂಮಿನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
        ಮಡಿಕೇರಿಲಿ ಮಂಜು!
ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡಗೋದಂಗೆ
        ಅಳ್ಳಾಡಾಲ್ದು ಮಂಜು!

ತಾಯಿ ಮೊಗಿನ್ ಎತ್ಕೊಂಡಂಗೆ
ಒಂದಕ್ಕೊಂದು ಅತ್ಕೊಂಡಂಗೆ
ಮಡಿಕೇರಿನ ಎದೆಗೊತ್ಕೊಂಡಿ
        ಜೂಗೀಡ್ಸ್ತಿತ್ತು ಮಂಜು
ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದೆಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
        ಮಡಕೇರೀ ಮೇಲ್ ಮಂಜು!

ಮಂಜಿನ ಮಸಕಿನ್ ಕಾವಲ್ನಲ್ಲಿ
ಒಣಗಿದ್ ಉದ್ದಾನೆ ವುಲ್ನಲ್ಲಿ
ಒಳಗೇ ಏನೋ ಸರದೋದಂಗೆ
        ಅಲಗಾಡ್ತಿತ್ತು ಮಂಜು
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಣದ್ ಸುತ್ತಿನ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
        ಗಸ್ತಾಕ್ತಿತ್ತು ಮಂಜು

ಸೂರ್ಯನ್ ಕರೆಯಾಕ್ ಬಂದ ನಿಂತೋರು
ಕೊಡಗಿನ್ ಎಲ್ಲಾ ಪೂವಮ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
        ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳೆಬಿಸಲಿನ್ ಕೆಂಪು
ಮಂಜಿನ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
        ಆಲಿನ್ ಸೌಂದ್ರೀ ಮಂಜು!

ಅಗಲೇ ಬರಲಿ ರಾತ್ರೇ ಬರಲಿ
ಬಿಸಲು ನೆಳ್ಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
        ಮಡಕೇರೀಗೆ ಮಂಜು!
ತೈಲ ನೀರಿನ್ ಮ್ಯಾಗಿದ್ದಂಗೆ
ಪೂವಮ್ಮ – ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋಂತಿತ್ತು
        ಮಡಕೇರೀಗೆ ಮಂಜು!

7 comments

  1. The moment I saw your profile I jumped on to see the content- Kannada lures- more so when it is from coorg- we dwelled  in kushalnagar till 2004 and I miss the place so much here at doha- Thanks for your blog – it was so refreshing to see them-

Leave a Reply